ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ನಿಲ್ಲದ ಮಹಾಮಳೆಗೆ ಮತ್ತೆ 35 ಜನ ಮೃತ್ಯು

ಹೊಸದಿಲ್ಲಿ:(ಸೀಧಿಬಾತ್ ನ್ಯೂಸ್ ಸರ್ವಿಸ್)
 ಪೂರ್ವ, ಉತ್ತರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ತನ್ನ ರುದ್ರ ನರ್ತನವನ್ನು ಮುಂದುವರಿಸಿದ್ದು, ಹಿಮಾಚಲ ಪ್ರದೇಶ, ಉತ್ತರಾ ಖಂಡ್‌ಗಳಲ್ಲಿ ಒಟ್ಟು 35 ಜನರು ಸಾವಿಗೀಡಾಗಿದ್ದಾರೆ. ಗುಜರಾತ್‌ನ ಕಛ…ನಲ್ಲಿ ಲಘು ಭೂಕಂಪವಾಗಿದೆ. ಅಪಾಯಮಟ್ಟ ಮೀರಿ ಹರಿಯುತ್ತಿರುವ ಜಮ್ಮು ಕಾಶ್ಮೀರದ ತಾವಿ ನದಿಯಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಮಹಾರಾಷ್ಟ್ರ, ಪಂಜಾಬ್‌, ಉತ್ತರ ಪ್ರದೇಶಗಳ ಮತ್ತಷ್ಟು ಪ್ರಾಂತ್ಯಗಳು ಜಲಾವೃತವಾಗಿವೆ. ರಾಜಸ್ಥಾನದಲ್ಲಿ ಮತ್ತಷ್ಟು ಮಳೆಯಾಗುವ ಸಂಭವವಿದೆ.

ಯಮುನೆ ದಡದಲ್ಲಿ ಪ್ರವಾಹ ಭೀತಿ: ಭಾರೀ ಮಳೆಯಿಂದಾಗಿ ಯಮುನಾ ನದಿ, ಅಪಾಯಮಟ್ಟ ಮೀರಿ ಹರಿಯುತ್ತಿದೆ. ಹಾಗಾಗಿ, ಆ ನದಿಯು ಸಾಗುವ ದಿಲ್ಲಿ, ಹರ್ಯಾಣ, ಪಂಜಾಬ್‌ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ದಿಲ್ಲಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, 2,120 ನಿರಾಶ್ರಿತರ ಶಿಬಿರಗಳನ್ನು ತೆರೆಯ ಲಾಗಿದ್ದು, ರಾಜ್ಯದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಶಿಬಿರಗಳಿಗೆ ತೆರಳುವಂತೆ ಅಲ್ಲಿನ ಸಿಎಂ ಅರವಿಂದ್‌ ಕೇಜ್ರಿ ವಾಲ್‌, ಜನರಲ್ಲಿ ಮನವಿ ಮಾಡಿದ್ದಾರೆ.

ಹರಿಯಾಣದಲ್ಲಿ ಹೈ ಅಲರ್ಟ್‌: ಹರಿಯಾ ಣದಲ್ಲಿರುವ ಹತಿನಿ ಕುಂಡ್‌ ಅಣೆಕಟ್ಟಿನಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು, ಅದರಿಂದ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸೇನೆಯನ್ನು ಸನ್ನದ್ಧಗೊಳಿಸಲಾಗಿದೆ. ಐಐಟಿ ರೋಪರ್‌ನಲ್ಲಿರುವ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

250 ಹಳ್ಳಿಗಳು ಜಲಾವೃತ: ಪಂಜಾಬ್‌ನಲ್ಲಿ, ರೋಪರ್‌, ನವಾಶಹರ್‌, ಜಲಂಧರ್‌, ಕಪುರ್ತಲಾ, ಲೂಧಿಯಾನಾ, ತರ್ನ್ ತರಣ್‌, ಮೋಗಾ, ಫಿರೋಜ್‌ಪುರ ಜಿಲ್ಲೆಗಳ 250ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿವೆ. ರವಿವಾರ ಸಂಜೆ ಹೊತ್ತಿಗೆ 209 ಹಳ್ಳಿಗಳ ಜನರನ್ನು ತೆರವು ಗೊಳಿಸಲಾಗಿದೆ.

574 ಕೋಟಿ ರೂ. ನಷ್ಟ: ಹಿಮಾಚಲದ ಪ್ರದೇಶದಲ್ಲಿ ಮಳೆಯಿಂದಾಗಿ, 574 ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಮುಖ್ಯ ಮಂತ್ರಿ ಜೈರಾಮ್‌ ಠಾಕೂರ್‌ ತಿಳಿಸಿದ್ದಾರೆ. ಸೋಮವಾರ ಒಂದೇ ದಿನ 102.5 ಮಿ.ಮೀ.ಗಳಷ್ಟು ಮಳೆ ಯಾಗಿ, ರಾಜ್ಯದಲ್ಲೇ ದಾಖಲೆಯಾಗಿದೆ.

ಮೇಘಸ್ಫೋಟಕ್ಕೆ 17 ಬಲಿ: ಉತ್ತರ ಪ್ರದೇಶದ ಕಾಶಿ ಜಿಲ್ಲೆಯ ಮೋರಿ ಬ್ಲಾಕ್‌ನಲ್ಲಿ ಮೇಘಸ್ಫೋಟ ಉಂಟಾಗಿ, 17 ಜನರು ಸಾವಿಗೀಡಾಗಿದ್ದಾರೆ. 18 ಜನರು ನಾಪತ್ತೆ ಯಾಗಿದ್ದು, ಅವರಿಗಾಗಿ ಶೋಧ ನಡೆದಿದೆ. ಜಲಾವೃತ ಪ್ರದೇಶಗಳಿಂದ ಇಬ್ಬರನ್ನು ಡೆಹ್ರಾಡೂನ್‌ಗೆ ಏರ್‌ಲಿಫ್ಟ್ ಮಾಡಲಾಗಿದೆ. ಶಾಲೆಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಿಲಾಗಿದೆ. ಉತ್ತರ ಪ್ರದೇಶದಲ್ಲಿ ಹರಿಯುತ್ತಿರುವ ಗಂಗಾ, ಯಮುನಾ, ಘಾಗ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಗಂಗಾ ನದಿಯು ಬದೌನ್‌, ಗರ್ಮುಕ್ತೇಶ್ವರ, ನರೌದಾ, ಫ‌ರುಕಾಬಾದ್‌ನಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಮೀನುಗಾರರ ರಕ್ಷಣೆ
ಜಮ್ಮು ಜಿಲ್ಲೆಯಲ್ಲಿ ತಾವಿ ನದಿಯ ಪ್ರವಾಹದ ನಡುವ ಸಿಲುಕಿದ್ದ ನಾಲ್ವರು ಮೀನುಗಾರರನ್ನು ಭಾರತೀಯ ವಾಯುಪಡೆಯ (ಐಎಎಫ್) ಸಿಬಂದಿ, ಯಶಸ್ವಿ ಕಾರ್ಯಾಚರಣೆ ಮೂಲಕ ಏರ್‌ಲಿಫ್ಟ್ ಮಾಡಿದ್ದಾರೆ. ಮೀನುಗಾರರು ನದಿಯ ನಡುವೆ ಸಿಲುಕಿದ ವಿಚಾರ ಮಧ್ಯಾಹ್ನ 12 ಗಂಟೆಗೆ ಐಎಎಫ್ಗೆ ಲಭ್ಯವಾಗಿತ್ತು. ಕೇವಲ ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ತಲುಪಿದ ವಾಯುಪಡೆ ಸಿಬಂದಿ, ಯಶಸ್ವಿಯಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿತು ಎಂದು ಜಮ್ಮುವಿನಲ್ಲಿ ವಾಯುಪಡೆಯ ಕಾರ್ಯಾಚರಣೆಗಳ ಉಸ್ತುವಾರಿ ಹೊತ್ತಿರುವ ಸಂದೀಪ್‌ ಸಿಂಗ್‌ ತಿಳಿಸಿದ್ದಾರೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಉತ್ತರಾಖಂಡದಲ್ಲಿ ಮತ್ತೊಂದು ಹೆಲಿಕಾಪ್ಟರ್‌ ಅವಘಡ ;ಪೈಲಟ್‌, ಸಹ ಪೈಲಟ್‌ ಅಪಾಯದಿಂದ ಪಾರು

Ansar Aziz Nadwi

ಊಟ ಮಾಡದ್ದಕ್ಕೆ 4ರ ಮಗಳನ್ನ ಸಾವನ್ನಪ್ಪುವಂತೆ ಥಳಿಸಿದ ತಾಯಿ

Ansar Aziz Nadwi

ನಬಾರ್ಡ್ ಸಹಯೋಗದೊಂದಿಗೆ ಜಮ್ಮು-ಕಾಶ್ಮೀರ, ಲಢಾಕ್ ಭಾಗದ ರೈತರಿಗೆ ಕೇಂದ್ರದ ನೆರವು

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ