ಕರ್ನಾಟಕ ಕರ್ನಾಟಕ / ಕೋಸ್ಟಲ್

ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ಶಿಕ್ಷಣ ಕಡ್ಡಾಯ?

ಬೆಂಗಳೂರು:(ಸೀಧಿಬಾತ್ ನ್ಯೂಸ್ ಸರ್ವಿಸ್) ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಕಂಪ್ಯೂಟರ್‌ ಶಿಕ್ಷಣವನ್ನು ಪರಿಣಾಮಕಾರಿಗಾಗಿ ಅನುಷ್ಠಾನ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿದ್ದು, ಈ ಸಂಬಂಧ ಪ್ರಸಕ್ತ ಸಾಲಿನಿಂದಲೇ ಕೆಲವೊಂದು ಪ್ರಾಯೋಗಿಕ ಕಾರ್ಯಕ್ರಮ ರೂಪಿಸಿದೆ.

ಪ್ರಸ್ತುತ ರಾಜ್ಯದ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮ(ಟ್ಯಾಲ್ಟ್) ಅಡಿಯಲ್ಲಿ ಕಂಪ್ಯೂಟರ್‌ ಶಿಕ್ಷಣವನ್ನು ಸೀಮಿತವಾಗಿ ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯದ 4,404 ಪ್ರೌಢಶಾಲೆಗಳ 12,000 ಶಿಕ್ಷಕರಿಗೆ ಇಂಡಕ್ಷನ್‌ ತರಬೇತಿ ಸಹ ನೀಡಲಾಗಿದೆ. ಈಗ ಪೂರ್ಣ ಪ್ರಮಾಣದಲ್ಲಿ ಕಂಪ್ಯೂಟರ್‌ ಅನ್ನು ಒಂದು ವಿಷಯವಾಗಿ ಬೋಧಿಸಲು ಸರಕಾರ ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ 2,500 ಪ್ರೌಢಶಾಲೆಗಳಿಗೆ ಲ್ಯಾಪ್‌ಟಾಪ್‌ ಮತ್ತು ಪ್ರೊಜೆಕ್ಟರ್‌ಗಳನ್ನು ಒದಗಿಸಲಾಗಿದೆ.

2019-20ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ 8, 9 ಮತ್ತು 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಕಂಪ್ಯೂಟರ್‌ ಶಿಕ್ಷಣಕ್ಕೆ ಪೂರಕ ವಾಗಿರುವ ಪಠ್ಯಕ್ರಮವನ್ನು ಅನುಷ್ಠಾನ ಮಾಡಬೇಕು. ಅನಂತರದ ಶೈಕ್ಷಣಿಕ ವರ್ಷಗಳಲ್ಲಿ ಈ ಕುರಿತು ಹೆಚ್ಚಿನ ನಿರ್ದೇಶನಗಳನ್ನು ಶಾಲೆಗಳಿಗೆ ನೀಡಲಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕನಿಷ್ಠ ತರಬೇತಿ
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ವಿಷಯದ ಕೆಲವೊಂದು ಪಾಠಗಳನ್ನು ಮಾತ್ರ ಕಂಪ್ಯೂಟರ್‌ ಶಿಕ್ಷಣದ ಮೂಲಕ ನೀಡಲಾಗುತ್ತಿದೆ. ವಾರಕ್ಕೆ ಒಂದು ಅಥವಾ ಎರಡು ತರಗತಿಗಳು ಮಾತ್ರ ಕಂಪ್ಯೂಟರ್‌ ಶಿಕ್ಷಣಕ್ಕೆ ಸೀಮಿತವಾಗಿರುತ್ತವೆ. ಈಗ ಕಂಪ್ಯೂಟರ್‌ ಲ್ಯಾಬ್‌ಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳ
ಕಲಿಕಾ ವಿಧಾನವನ್ನು ಇನ್ನಷ್ಟು ಉತ್ತಮಗೊಳಿಸಬೇಕು. ಪ್ರೌಢಶಾಲೆಯ ಪ್ರತಿ ವಿದ್ಯಾರ್ಥಿಗೂ ಕಂಪ್ಯೂಟರ್‌ ಕೌಶಲ ಒದಗಿಸಲು ಇಲಾಖೆ ಖಡಕ್‌ ನಿರ್ದೇಶನ ನೀಡಿದೆ.

ಒಂದು ವಿಷಯವಾಗಿ ಕಡ್ಡಾಯ
ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷಣವನ್ನು ಒಂದು ವಿಷಯವಾಗಿ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕೆಲವೊಂದು ಕ್ರಮ ತೆಗೆದುಕೊಂಡಿದೆ. ಎನ್‌ಸಿಇಆರ್‌ಟಿ-ಸಿಐಟಿಇ ಯವರು ರೂಪಿಸಿರುವ ವಿದ್ಯಾರ್ಥಿ ಐಸಿಟಿ ಪಠ್ಯವಸ್ತುವನ್ನು ಪ್ರಥಮ ವರ್ಷದ ಪಠ್ಯಕ್ರಮವನ್ನು ಬೋಧಿಸಬೇಕು. ವಿದ್ಯಾರ್ಥಿಗಳ ಪಠ್ಯಕ್ರಮವು ಕಂಪ್ಯೂಟರ್‌ ಕಲಿಕೆಗೆ ಪೂರಕವಾಗುವ ಚಟುವಟಿಕೆಗಳು ಇರಬೇಕು ಎಂದು ಸೂಚನೆ ನೀಡಿದೆ.

ವಿದ್ಯಾರ್ಥಿಗಳ ಕಂಪ್ಯೂಟರ್‌ ಕಲಿಕೆಗೆ ಶಾಲಾ ವೇಳಾಪಟ್ಟಿಯಲ್ಲಿ ವಾರಕ್ಕೆ ಕನಿಷ್ಠ ಮೂರು ತರಗತಿಗಳಂತೆ ವರ್ಷಕ್ಕೆ 30 ವಾರಗಳಿಗೆ ನಿಗದಿಪಡಿಸಿ ವೇಳಾಪಟ್ಟಿಯನ್ನು ಸೂಕ್ತ ರೀತಿಯಲ್ಲಿ ಮಾರ್ಪಾಡು ಮಾಡಬೇಕು. ಟ್ಯಾಲ್ಟ್ ಅಡಿಯಲ್ಲಿ ತರಬೇತಿ ಹೊಂದಿದ ಎಲ್ಲ ಶಿಕ್ಷಕರು ವಿದ್ಯಾರ್ಥಿ ಗಳಿಗೆ ಕಂಪ್ಯೂಟರ್‌ ಶಿಕ್ಷಣ ಒದಗಿಸುವ ಜವಾಬ್ದಾರಿ ಹೊಂದಿರುತ್ತಾರೆ. ಐಸಿಟಿ ಪಠ್ಯವಸ್ತುವನ್ನು ಆಫ್ಲೈನ್‌ ಮೂಲಕ ನೀಡಲಾಗಿದ್ದು, ಪ್ರತಿ ಕಂಪ್ಯೂಟರ್‌ನಲ್ಲಿ ಅದನ್ನು ಅಳವಡಿಸಬೇಕು. ಶಾಲಾಪೂರ್ವ ಮತ್ತು ಅನಂತರದ ಅವಧಿ ಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ ನಡೆಸಲಾಗುತ್ತಿದ್ದರೆ ಅಂಥ ಅವಧಿಯಲ್ಲಿ ಕಂಪ್ಯೂಟರ್‌ ಲ್ಯಾಬ್‌ ಬಳಕೆಗೆ ಮುಕ್ತ ಅವಕಾಶ ನೀಡಬೇಕು ಎಂದು ತಿಳಿಸಲಾಗಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

“ಕೈ’ ಶಾಸಕರು, ನಾಯಕರ ತದ್ವಿರುದ್ಧ ಅಭಿಪ್ರಾಯ

Ansar Aziz Nadwi

ಮುಂದಿನ 24ಗಂಟೆಗಳಲ್ಲಿ ಭಾರೀ ಮಳೆ, ಕಾಸರಗೋಡಿನಲ್ಲಿ ರೆಡ್ ಅಲರ್ಟ್; ಹವಾಮಾನ ಇಲಾಖೆ

Ansar Aziz Nadwi

ಪ್ರವಾಹಕ್ಕೆ ನಲುಗಿದ ಉ.ಕರ್ನಾಟಕ: ಹೆಚ್ಚುತ್ತಿದೆ ಸಾವಿನ ಸಂಖ್ಯೆ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ