ರಾಷ್ಟ್ರೀಯ ರಾಷ್ಟ್ರೀಯ ಸುದ್ದಿ

ಬಾಲಾಕೋಟ್‌ ಬಳಿಕ ಉಗ್ರರ ಎದುರಿಸುವ ತಂತ್ರ ಬದಲು

ಗಾಜಿಯಾಬಾದ್‌/ಹಿಂಡನ್‌:(ಸೀಧಿಬಾತ್ ನ್ಯೂಸ್ ಸರ್ವಿಸ್) ಪಾಕಿಸ್ಥಾನದ ಬಾಲಾಕೋಟ್‌ನಲ್ಲಿ ಉಗ್ರರ ಶಿಬಿರಗಳ ಮೇಲೆ ವಾಯುಪಡೆ ನಡೆಸಿದ ದಾಳಿಯು ಭಯೋತ್ಪಾದಕರ ದಾಳಿಯನ್ನು ಎದುರಿಸುವ ಸರಕಾರದ ತಂತ್ರ ಬದಲಾಗಿರುವುದನ್ನು ತೋರಿಸಿದೆ. ಅಂಥ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಂದೇಶ ರವಾನೆಯಾಗಿದೆ ಎಂದು ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ಆರ್‌.ಕೆ.ಎಸ್‌. ಭದೌರಿಯಾ ಹೇಳಿದ್ದಾರೆ.

ಭಾರತೀಯ ವಾಯುಪಡೆ (ಐಎಎಫ್ನ)ಯ 87ನೇ ಸಂಸ್ಥಾಪನಾ ದಿನ ಪ್ರಯುಕ್ತ ಗಾಜಿಯಾಬಾದ್‌ನ ವಾಯು ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. “ರಾಜಕೀಯವಾಗಿ ಇರುವ ಪ್ರಬಲ ನಾಯಕತ್ವ ಬಾಲಾಕೋಟ್‌ ದಾಳಿಯಂಥ ವ್ಯೂಹಾತ್ಮಕ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಿದೆ. ಈ ಮೂಲಕ ಉಗ್ರ ಕೃತ್ಯಗಳನ್ನು ನಡೆಸಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂಬ ಸಂದೇಶ ರವಾನೆಯಾಗಿದೆ. ಜತೆಗೆ ಐಎಎಫ್ಗೂ ಅಂಥ ದಾಳಿಯನ್ನು ಸುಸೂತ್ರವಾಗಿ ನಡೆಸುವ ಸಾಮರ್ಥ್ಯ ಇದೆ ಎನ್ನುವುದು ಸಾಬೀತಾಗಿದೆ’ ಎಂದಿದ್ದಾರೆ.

ಪಾಕಿಸ್ಥಾನದ ಹೆಸರು ಉಲ್ಲೇಖೀಸದೇ ಮಾತನಾಡಿದ ಅವರು, ಭದ್ರತೆ ಎನ್ನುವುದು ಗಂಭೀರ ವಿಚಾರ. ಪುಲ್ವಾಮಾ ದಾಳಿ ಪ್ರಮುಖ ರಕ್ಷಣಾ ನೆಲೆಗಳಿಗೆ ಎಚ್ಚರಿಕೆಯ ಗಂಟೆ ಎಂದಿ ದ್ದಾರೆ. ಹೀಗಾಗಿ, ಐಎಎಫ್ ಸೈಬರ್‌ ಮತ್ತು ಮಾಹಿತಿ ಕೋಶದ ಮೇಲೆ ಹೆಚ್ಚಿನ ನಿಗಾ ಇರಿಸಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.

ಹಿಂಡನ್‌ ವಾಯು ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ವಿದ್ಯಮಾನಗಳು ಬಹಳ ಕ್ಷಿಪ್ರವಾಗಿ ಬದಲಾಗುತ್ತಿವೆ. ಅಸ್ಥಿರತೆಗೆ ಕಾರಣವಾಗಿರುವ ಕೆಲ ಅಂಶಗಳು ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೂ ಧಕ್ಕೆಯಾ ಗಿವೆ. ಹೀಗಾಗಿ ಗರಿಷ್ಠ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಒಂದು ವರ್ಷದ ಹಿಂದೆ ಅಂಥ ಸ್ಥಿತಿಯನ್ನು ಎದುರಿಸಬಲ್ಲೆವು ಎಂದು ತೋರಿಸಿದ್ದೇವೆ ಎಂದು ಬಾಲಾಕೋಟ್‌ ದಾಳಿಯನ್ನು ಪ್ರಸ್ತಾವಿಸಿದರು. ಐಎಎಫ್ನ ಎಲ್ಲ ಹಂತದ ಅಧಿಕಾರಿಗಳು ಸಿಬಂದಿ ಉತ್ತಮ ರೀತಿಯಲ್ಲಿ ಕರ್ತವ್ಯ ಪರಾಯಣತೆಯನ್ನು ತೋರಿಸುತ್ತಿದ್ದಾರೆ ಎಂದು ಶ್ಲಾ ಸಿದರು.

ಅಭಿನಂದನ್‌ ಭಾಗಿ: ಬಾಲಾಕೋಟ್‌ ದಾಳಿಯ ಯಶಸ್ಸಿನ ಪ್ರಮುಖ ವೀರ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಮತ್ತು ಇತರ ಪೈಲಟ್‌ಗಳು ವಿಮಾನಗಳ ಹಾರಾಟದಲ್ಲಿ ಭಾಗವಹಿಸಿದ್ದರು. ಅಭಿನಂದನ್‌ ಅವರೇ ಮಿಗ್‌-21 ಬಿಸೋನ್‌ ಯುದ್ಧ ವಿಮಾನಗಳ ನೇತೃತ್ವ ವಹಿಸಿ ಹಾರಾಟ ನಡೆಸಿದ್ದು ವಿಶೇಷವಾಗಿತ್ತು.

ಪ್ರಧಾನಿ ಶ್ಲಾಘನೆ: ದೇಶದ ರಕ್ಷಣೆಯಲ್ಲಿ ಐಎಎಫ್ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾ ಸಿದ್ದಾರೆ. ಜತೆಗೆ ಪ್ರಾಕೃತಿಕ ವಿಕೋಪ ಪರಿಸ್ಥಿತಿಗಳ ಅವಧಿಯಲ್ಲಿ ಕೂಡ ಅದರ ಪಾತ್ರ ಅಮೋಘವಾದದ್ದು ಎಂದು ಅವರು ವೀಡಿಯೋ ಸಂದೇಶದಲ್ಲಿ ಕೊಂಡಾಡಿದ್ದಾರೆ.

ಪಾಕಿಸ್ಥಾನಕ್ಕೆ ಸುಖೋಯ್‌-30 ಎಂಕೆಐ ಶಾಕ್‌!
ಹಿಂಡನ್‌ನಲ್ಲಿ ನಡೆದ ಐಎಎಫ್ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಪ್ರಧಾನ ಆಕರ್ಷಣೆಯಾದದ್ದು ಬಾಲಾಕೋಟ್‌ ದಾಳಿಯಲ್ಲಿ ಪಾಕಿಸ್ಥಾನದ ಹೊಡೆದು ಹಾಕಿದ್ದೇವೆ ಎಂದು ಹೇಳಿಕೊಂಡಿದ್ದ ಸುಖೋಯ್‌-30 ಎಂಕೆಐ ವಿಮಾನದ ಹಾರಾಟ. ಮಿರಾಜ್‌-2000 ಯುದ್ಧ ವಿಮಾನಗಳ ಜತೆಗೆ ತೀರಾ ಬಲಬದಿಯಲ್ಲಿ ಹಾರುತ್ತಿದ್ದ ಸುಖೋಯ್‌-30 ಎಂಕೆಐ ವಿಮಾನವನ್ನೇ ಫೆ.27ರಂದು ಹೊಡೆದು ಉರುಳಿಸಿದ್ದ ಬಗ್ಗೆ ಪಾಕ್‌ ಸರಕಾರ ಹೇಳಿಕೊಂಡಿತ್ತು. ಆ ರಾಷ್ಟ್ರಕ್ಕೆ ಮತ್ತಷ್ಟು ಮುಜುಗರವಾಗುವ ವಿಚಾರವೆಂದರೆ, ಫೆ.27ರಂದು ವಿಮಾನವನ್ನು ಹಾರಿಸಿದ್ದ ಪೈಲಟ್‌ಗಳೇ ವಾರ್ಷಿಕ ದಿನದ ವೇಳೆ ಹಾರಾಟ ನಡೆಸಿದ್ದು ಮತ್ತೂಂದು ಪ್ರಧಾನ ಅಂಶ. ಈ ಮೂಲಕ ಪಾಕಿಸ್ಥಾನದ ಹಸಿ ಸುಳ್ಳನ್ನು ವಾಯುಪಡೆ ಬಹಿರಂಗಪಡಿಸಿದಂತಾಗಿದೆ.

ಅಭಿನಂದನ್‌ರ ಸ್ಕ್ವಾಡ್ರನ್‌ಗೆ ಪ್ರಶಸ್ತಿ
ಬಾಲಾಕೋಟ್‌ ದಾಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಐಎಎಫ್ನ 51ನೇ ಸ್ಕ್ವಾಡ್ರನ್‌ಗೆ ಮತ್ತು 9ನೇ ಸ್ಕ್ವಾಡ್ರನ್‌ಗೆ ಐಎಎಫ್ ಮುಖ್ಯಸ್ಥರ ಪ್ರಶಂಸಾ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ 51ನೇ ಸ್ಕ್ವಾಡ್ರನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು 9ನೇ ಸ್ಕ್ವಾಡ್ರನ್‌ನ ಅಧಿಕಾರಿ ಮತ್ತು ಸಿಬಂದಿ ದಾಳಿಗೆ ಅಗತ್ಯವಾಗಿರುವ ತಾಂತ್ರಿಕ ನೆರವು ನೀಡಿದ್ದರು. ಈ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

Source:-udayavani

ಸಂಬಂಧಿತ ಪೋಸ್ಟ್ಗಳು

ಪಿಎನ್‌ಬಿ ಗೆ 7,200 ಕೋಟಿ ರೂ. ಬಡ್ಡಿ ಪಾವತಿಸಿ: ನೀರವ್‌ ಮೋದಿಗೆ ಡಿಆರ್‌ಟಿ ಆದೇಶ

Ansar Aziz Nadwi

ಮುಂಬಯಿ ಕಟ್ಟಡ ಕುಸಿತ: 11 ಸಾವು

Ansar Aziz Nadwi

ಕೇಂದ್ರ ಬಜೆಟ್ 2019: ರೈಲ್ವೆ ಆಧುನೀಕರಣಕ್ಕೆ ಆದ್ಯತೆ, ಮೆಟ್ರೋ ಸಂಪರ್ಕ ವಿಸ್ತರಣೆ

Ansar Aziz Nadwi

ಒಂದು ಕಾಮೆಂಟ್ ಬಿಡಿ

ವಿಮರ್ಶೆ ಬಿಡಿ